Description
ಬ್ರಿಟಿಷ್ ವಸಾಹತುಶಾಹಿಗೆ ಮುಖ್ಯವಾಗಿ ಬಲಿಯಾದದು ದೇಶದ ರೈತಾಪಿ ಜನತೆ. ಅವರು ಉತ್ಪಾದಿಸಿದ್ದರಲ್ಲಿ ಬಹುಭಾಗವನ್ನು ಸರಕಾರವು ಭೂಕಂದಾಯ ಮತ್ತು ಇತರ ತೆರಿಗೆಗಳ ರೂಪದಲ್ಲಿ ಕಿತ್ತುಕೊಂಡುಬಿಡುತ್ತಿತ್ತು. ಬಹುಬೇಗನೆ ಈ ಜನ ಭೂಮಾಲೀಕನ ಹಾಗೂ ಹಣ ಸಾಲಕೊಡುವ ಸಾಹುಕಾರನ ಕಪಿಮುಷ್ಟಿಗೆ ಸಿಕ್ಕಿಕೊಂಡರು. ರೈತನು ತನ್ನ ನೆಲಕ್ಕಾಗಲಿ, ತಾನು ಬೆಳೆದ ಬೆಳೆಗಾಗಲಿ ಯಜಮಾನನಾಗಿ ಉಳಿಯಲಿಲ್ಲ. ತನ್ನ ದುಡಿಮೆಯ ಶಕ್ತಿಯ ಬಗೆಗೂ ಅವನಿಗೆ ಸ್ವಾತಂತ್ರ‍್ಯವಿರಲಿಲ್ಲ. ರೈತರು ಜಮೀನ್ದಾರರ, ಭೂಮಾಲೀಕರ, ಸಾಹುಕಾರರ ವಿರುದ್ಧವಾಗಿ ರಾಜಕೀಯ ಮತ್ತು ಆರ್ಥಿಕ ಹೋರಾಟವನ್ನು ವ್ಯವಸ್ಥೆಗೊಳಿಸಿದಾಗ ಸರಕಾರವು ಕಾನೂನು ಶಾಂತಿ ಶಿಸ್ತುಗಳ ಹೆಸರಿನಲ್ಲಿ ಸಮಸ್ತ ಪೋಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆಗಳನ್ನು ಕಾರ್ಯಮುಖವಾಗಿಸಿ, ಆ ಹೋರಾಟಗಳನ್ನು ಅತ್ಯಂತ ಹೇಯವಾದ ರೂಪದಲ್ಲಿ ದಮನಗೊಳಿಸುತ್ತಿತ್ತು.
ಹೀಗಾಗಿಯೇ ಹಳ್ಳಿ ಹಳ್ಳಿಗಳಿಗೆ ಪೋಲಿಸರು ನುಗ್ಗಿ ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸುತ್ತಿದ್ದರು. ಹೀಗೆಯೇ ಸ್ವಾತಂತ್ರ‍್ಯ ಹೋರಾಟಗಾರರಾದ ಹೆಬ್ಬಣಿ ನಾಗಪ್ಪನವರನ್ನು ಬಂಧಿಸಲು ಸರ್ಕಾರಿ ಜೀಪೊಂದರಲ್ಲಿ ತಹಸೀಲ್ದಾರ್ ಮತ್ತು ಪೊಲೀಸ್‌ನವರು ಹೆಬ್ಬಣಿ ಗ್ರಾಮಕ್ಕೆ ಬಂದು ಅಲ್ಲಿಯೇ ನಿಂತಿದ್ದ ತೋಟಿ ದೊನ್ನಿಕಟ್ಟಿಗಾರಿ ವೆಂಕಟಮ್ಮನನ್ನು ಕರೆದು ‘ಈ ಊರಿನಲ್ಲಿ ಕಾಂಗ್ರೆಸ್ ನಾಗಪ್ಪ ಅಂತ ಇದ್ದಾನಂತಲ್ಲ; ಅವ್ನು ಎಲ್ಲಿರ್ತಾನೆ? ಅವನ ಮನೆ ಎಲ್ಲಿ’ ಅಂತ ಕೇಳುತ್ತಾರೆ. ಆಗ ವೆಂಕಟಮ್ಮ ರಚ್ಚೆ ಕಡೆ ನೋಡಿ “ಅಯ್ಯೋ ಸ್ವಾಮಿ ಅವನೊಬ್ಬ ಪೋಲಿ, ಎಲ್ಲಿರ್ತಾನೊ ಏನು ಕಥೆನೊ, ನೆನ್ನೆ ಊರುಬಿಟ್ಟು ಹೋದವನು ಇನ್ನೂ ಹಿಂದಿರುಗಿಲ್ಲ, ಯಾವಾಗ ಬರುತ್ತಾನೋ ಏನೋ ಗೊತ್ತಿಲ್ಲ ಬುದ್ಧಿ’ ಎಂದು ಹೇಳುತ್ತಾಳೆ. ನಂತರ ಮನೆ ತೋರಿಸೆಂದು ತೋಟಿ ವೆಂಕಟಮ್ಮನನ್ನು ಕರೆದುಕೊಂಡು ಅಧಿಕಾರಿಗಳು ಹೆಬ್ಬಣಿ ನಾಗಪ್ಪನವರ ಮನೆಕಡೆ ಹೊರಟರೆ, ನಾಗಪ್ಪನವರು ಇದೆಲ್ಲವನ್ನು ಗಮನಿಸಿ ವೆಂಕಟಮ್ಮನ ಸಮಯ ಪ್ರಜ್ಞೆ ಮತ್ತು ಜಾಣ್ಮೆಯನ್ನು ಮೆಚ್ಚಿ ತಪ್ಪಿಸಿಕೊಂಡು ಊರು ಬಿಟ್ಟು ಹೋದರು. ಮುಗ್ಧ ಹೆಂಗಸು ವೆಂಕಟಮ್ಮ ಅವರಿಗೆ ಎದುರಿನಲ್ಲಿ ಕುಳಿತಿರುವ ನಾಗಪ್ಪ ಕಣ್ಣಿಗೆ ಕಾಣಿಸುತ್ತಿದ್ದರು, ತಡವರಿಸದೆ ‘ಅವನೊಬ್ಬ ಪೋಲಿ’ ಎನ್ನುವ ಮೂಲಕ ಪೊಲೀಸರಿಗೆ ಅನುಮಾನ ಬಾರದಂತೆ ಉತ್ತರ ಕೊಟ್ಟು ಹೆಬ್ಬಣಿ ನಾಗಪ್ಪನವರನ್ನು ಪೋಲಿಸರಿಂದ ತಪ್ಪಿಸಿಕೊಳ್ಳಲು ಸಹಕರಿಸುತ್ತಾರೆ.
ಈ ರೀತಿಯಾಗಿ ಇಡೀ ಊರಷ್ಟೇ ಅಲ್ಲ, ಆಂಧ್ರ ಪ್ರದೇಶದ ಗಡಿ ಭಾಗ ಸೇರಿದಂತೆ ಕೋಲಾರ, ಬೆಂಗಳೂರು ಮತ್ತು ಮೈಸೂರು ಪ್ರಾಂತ್ಯದಲ್ಲಿ ದೇಶದ ಸ್ವಾತಂತ್ರ‍್ಯ ಹೋರಾಟಕ್ಕಾಗಿ ಸುದೀರ್ಘವಾಗಿ ತನ್ನ ಜೀವನವನ್ನು ಮೀಸಲಿಟ್ಟಿದ್ದ ‘ಸ್ವಾತಂತ್ರ‍್ಯ ಹೋರಾಟಗಾರ ಹೆಬ್ಬಣಿ ನಾಗಪ್ಪ’ನವರ ಸ್ವಾತಂತ್ರ‍್ಯ ಹೋರಾಟಗಾಥೆಯನ್ನು ಜನ ಪ್ರಕಾಶನದಿಂದ ಪ್ರಕಟಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹೆಬ್ಬಣಿ ನಾಗಪ್ಪನವರಂತೆ ಸಾಮ್ರಾಜ್ಯಶಾಹಿ ಸುಲಿಗೆಕೋರರ ವಿರುದ್ಧ ಬಂಡೆದ್ದ ದೇಶದ ಸ್ವಾತಂತ್ರ‍್ಯ ಹೋರಾಟದ ಸೇನಾನಿಗಳು, ಪ್ರಧಾನವಾಗಿ ಗಾಂಧೀಜಿಯವರ ನೇತೃತ್ವದಲ್ಲಿ ಧೀರ್ಘ ಕಾಲದ ಸ್ವಾತಂತ್ರ‍್ಯ ನಡೆಸಿದ್ದಾರೆ. ಇಂಥವರ ಪೈಕಿ ಹೆಬ್ಬಣಿ ನಾಗಪ್ಪನವರು ಒಬ್ಬರು. ಇವರು ಅಪ್ಪಟ ಗಾಂಧಿವಾದಿಯಾಗಿದ್ದರು.
ಸರ್ವಣೀಯರೆದುರು ಎದೆ ಎತ್ತಿ ಮಾತನಾಡದ ಸ್ಥಿತಿಯಲಿದ್ದ ದಲಿತರನ್ನು ಅಣ್ಣ-ತಮ್ಮಂದಿರ0ತೆ ಕಂಡ ಹೆಬ್ಬಣಿ ನಾಗಪ್ಪನವರು, ಕೇವಲ ಬ್ರಿಟೀಷ್ ವಸಹಾತುಗಳು ಇಲ್ಲಿಂದ ಕಾಲ್ಕೀಳಲಿ ಎಂಬುದಷ್ಟೇ ಅಲ್ಲ. ಇಲ್ಲಿರುವ ಸಮಸ್ತರೂ ಸರಿ-ಸಮಾನವಾಗಿ ಸ್ವಾಭಿಮಾನದಿಂದ ಬದುಕುವಂತವರಾಗಬೇಕೆ0ಬ ನೈಜ ಸ್ವಾತಂತ್ರ‍್ಯಕ್ಕಾಗಿ ಶ್ರಮಿಸಿದ್ದ ಮಹನೀಯರಿವರು.