ಇತ್ತೀಚಿಗೆ ಜನಪ್ರಕಾಶನದ ‘ಸಂವಿಧಾನ ಪೀಠಿಕೆ: ಒಂದು ಪುಟ್ಟ ಮುನ್ನುಡಿ’ ಪುಸ್ತಕದ ಬಿಡುಗಡೆ ಕೋರಮಂಗಲದ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ‘ಸ್ಲಂ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಆ ಜಾಗದ ಜನರೆಲ್ಲ ಸಂವಿಧಾನದ ಆಶಯಗಳಿಗೆ ಯಾವ ರೀತಿ ಕಿವಿಯಾಗಿದ್ದರೆಂದರೆ ಅವರಲ್ಲಿ ಅರಿವಿನ ದಾಹ ಎಷ್ಟೋ ದಿನ ಹಸಿದವರಿಗೆ ಅನ್ನ ಹಾಕಿದ ಹಾಗೆ ಇಡೀ ಸಮಾರಂಭದಲ್ಲಿ ಎಲ್ಲ ಅತಿಥಿಗಳ ಮಾತನ್ನು ಕೊನೆಯವರೆಗೆ ಆಲಿಸಿ ನೂರಾರು ಪುಸ್ತಕಗಳನ್ನು ತೆಗೆದುಕೊಂಡು ಹೋದರು, ಆದರೆ ಸಮಾರಂಭದಲ್ಲಿ ಮಾರ್ಗ ಎಂಬ ಎನ್.ಜಿ.ಒ ನಡೆಸುವ ಪ್ರಭಾಕರ್ ಎಂಬುವವರ ಮಾತು ನೆರೆದಿದ್ದವರೆಗೆ ನಾಟಿ ಜನರ ಮನದಲ್ಲಿ ರಿಂಗಣಿಸಿತು.
‘ನಾವು ಎರಡನೇ ದರ್ಜೆಯ ಪ್ರಜೆಗಳು’ ಇಲ್ಲಿ ನಮಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಬಂದವರೆಲ್ಲ ನಮ್ಮನ್ನು ಬಳಿಸಿಕೊಂಡು ಬೆಳೆದು ಬಂದರು ನಾವಿನ್ನೂ ನಿಂತಲ್ಲೇ ನಿಂತ ನೀರಾಗಿ ಕೊಳೆಯುತ್ತಿದ್ದೇವೆ. ಎಂಬ ನುಡಿಗಳು ಸ್ವಾತಂತ್ರ್ಯ ಬಂದು ಇಷ್ಟು ದಿನಗಳ ನಂತರ ಪ್ರಜಾತಂತ್ರ ರೂಪುಗೊಂಡು ಏಳು ದಶಕಗಳ ನಂತರವೂ ಪ್ರಭುತ್ವವು ಸಮಾಜವನ್ನು ಹೇಗೆ ಹೀನಾಯವಾಗಿ ಉಂಡೆಲೆಯ ಹಾಗೆ ಬಳಸಿಕೊಳ್ಳುತ್ತಿದೆ ಎಂಬ ಚಿತ್ರಣ ಒದಗಿಸುತ್ತದೆ.
ಸ್ಲಂ ಎಂದು ಕರೆಯಲ್ಪಡುವ ಅಂತಹ ಪ್ರದೇಶಗಳು ನಮ್ಮ ಒಕ್ಕೂಟ ಭಾರತದ ಆರ್ಥಿಕತೆಗೆ ನೀಡಿದಂತಹ, ನೀಡುತ್ತಿರುವಂತಹ ಕೊಡುಗೆ ಯಾವುದೇ ಬಹುರಾಷ್ಟ್ರೀಯ ಉದ್ಯಮದ ತೆರಿಗೆಗೆ ಕಮ್ಮಿ ಅಲ್ಲ; ಧಾರಾವಿಯಂತಹ ಪ್ರದೇಶ ಭಾರತಕ್ಕೆ 650 ಬಿಲಿಯನ್ ನಷ್ಟು ಆದಾಯವನ್ನು ತಂದುಕೊಡುತ್ತದೆ.
ಯಾಕೆಂದರೆ ಇಲ್ಲಿ ಯಾರೂ ಖಾಲಿ ಕುಳಿತುಕೊಂಡಿಲ್ಲ ಭಾರತದಲ್ಲಿ ಅತಿ ಹೆಚ್ಚು ಮರುಬಳಿಕೆ ವಸ್ತುಗಳನ್ನು ಉತ್ಪಾದಿಸುವುದು ಇದೇ ಪ್ರದೇಶ. ಇಲ್ಲಿ ದೊಡ್ಡದೇನನ್ನೋ ಸಾಧಿಸಬೇಕೆಂದುಕೊಳ್ಳುವ ಅಥವಾ ಸಾಧಿಸಿರುವ ಯುವ ಶಕ್ತಿಯ ದಂಡೇ ಇದೆ. ಇದಕ್ಕೆಲ್ಲ ದೃಷ್ಟಿಬೊಟ್ಟಾಗಿ “ಸ್ಲಂ” ಎಂಬ ಹೆಸರು ಉಳಿಸುಕೊಂಡಿದೆ.
ಇಲ್ಲಿನ ವೈವಿಧ್ಯಮಯ ಸಾಮಾಜಿಕ, ಸಾಂಸ್ಕøತಿಕ ಘರ್ಷಣೆಗಳು ‘ವರದರಾಜ್ ಮೂದಲಿಯಾರ್’ರಂತವರನ್ನೂ ‘ನವಾಜುದ್ದೀನ್ ಸಿದ್ದುಕಿ’ ಅಂತವರನ್ನೂ ಹುಟ್ಟಿ ಹಾಕಿವೆ, ಇಂತಹ ವ್ಯತಿರಿಕ್ತ ವ್ಯಕ್ತಿತ್ವಗಳ ಮೂಲನೆಲೆ ‘ಸ್ಲಂ’, ಇಲ್ಲಿರುವ ಶೆಡ್ಡು, ಗುಡಿಸಲಲ್ಲಿ ಒಬ್ಬ ಅಂಬೇಡ್ಕರೋ ಅಥವಾ ಫುಲೆಯೋ ಬೆಳೆಯುತ್ತಿರುತ್ತಾನೆ, ಬೆವರಿನ ಊಟದ ರುಚಿ ಗೊತ್ತಿದ್ದ ಆತ ಮಾತ್ರ ಮುಖ್ಯ ವಾಹಿನಿಗೆ ಬಂದರೆ ಸಮಾಜದ ದುಗುಡವನ್ನು ತಿದ್ದಬಲ್ಲ. ಒಂದು ವೇಳೆ ಇಲ್ಲಿಂದ ಯಾರಾದರೂ ಪ್ರಸಿದ್ಧರಾಗಿ ಮುಂದೆ ಹೋದರು ಈ ಸ್ಲಂ ಹಣೆಪಟ್ಟಿ ಹೋಗುವುದಿಲ್ಲ.
ಸ್ಲಂ ಸಮಾಜದ ಕೊಳೆಯಲ್ಲ, ಪ್ರಭುತ್ವದಕ್ಕಂಟಿದ ಕೊಳೆ, ಪ್ರಭುತ್ವ ಜಡ್ಡುಗಟ್ಟಿ ಹೋಗಿದೆ ಅದನ್ನು ತೊಳೆದು ಶುಭ್ರಗೊಳಿಸಬೇಕಿದೆ. ಅದು ನಮ್ಮ ಮುಂದಿರುವ ಗುರುತರವಾದ ಕರ್ತವ್ಯ, ಸ್ಲಂ ಎಂಬ ವಸತಿ ಪ್ರದೇಶ ನೋಡುಗರಿಗೆ ವಿಷಾದನೀಯ ಹಾಗೂ ಅಲ್ಲಿನವರಿಗೆ ವಿಷಮಕಾರಿಯಾಗಿಯೂ ಹೆಗಲೇರಿದೆ.
ಇಂತಹ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಆಗ ವೈದ್ಯಕೀಯ ಸಹಾಯದ ಅಲಭ್ಯತೆಯಿಂದ ಎಷ್ಟೋ ಜನರು ಸಾಯುತ್ತಾರೆ, ಸರ್ಕಾರಕ್ಕೆ ಅವರು ಬರೀ ಸಂಖ್ಯೆಗಳಷ್ಟೇ! ಅವರಿಗೆ ಯಾವುದೇ ಶೋಕವಿಲ್ಲ; ಕಿಂಚಿತ್ ಜವಾಬ್ದಾರಿಯೂ ಇಲ್ಲ ಅವರಿಗೆ ಓಟುಗಳಾಗಿರುವ ಆ ಜನ ನೋಟು ಹಂಚಿ ಆದ ಮೇಲೆ ನಗಣ್ಯರಾಗುತ್ತಾರೆ.
ಸರಿಯಾದ ಶಿಕ್ಷಣ ಇಲ್ಲ, ವೈದ್ಯಕೀಯ ವ್ಯವಸ್ಥೆಯಿಲ್ಲ, ವಸತಿಯಿಲ್ಲ ಏನಿಲ್ಲದಿದ್ದರೂ ಅದೇ ವಾತಾವರಣದಲ್ಲಿ ಬೆಳೆದು ಬೆಳಗಲು ಎಷ್ಟೋ ಮಿಂಚಿನ ಮರಿಗಳು ಕಾಯುತ್ತಿವೆ, ಅವುಗಳಿಗೆ ನಾವೆಲ್ಲ ಪುಷ್ಠಿ ನೀಡಬೇಕಷ್ಟೇ!

 


ಎ.ಬಿ.ನಿಖಿಲ್

Leave a Reply

Your email address will not be published. Required fields are marked *