Description
ಕಕ್ಷೆಯಲ್ಲಿ ಅಕ್ಷರಚುಕ್ಕಿ
ʻನೀರೆಲ್ಲ ಬತ್ತಿ, ಹೊಲವೆಲ್ಲ ಒಣಗಿ, ಕಾಡೆಲ್ಲ ಬೂದಿಯಾದ ಮೇಲೆ ನೀನೇನು ಕಿಸೆಯಲ್ಲಿನ ರೂಪಾಯಿ ನೋಟುಗಳನ್ನು ತಿಂದು ಜೀವಿಸಬಲ್ಲೆಯಾ?ʼ ಎಂದು ಆದಿವಾಸಿ ಕವಿಯೊಬ್ಬ ಹಾಡಿದ್ದು ಈ ಕೃತಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ. ಆಸೆಬುರುಕರ ದಾಂಗುಡಿಯಲ್ಲಿ ಇಡೀ ಪೃಥ್ವಿಯ ಹಸಿರುಡುಗೆಯೆಲ್ಲ ಚಿಂದಿಯಾಗುವಾಗ, ನೆಲಮೂಲದ ಜನರೇ ಹೇಗೆ ಅವರ ಅಂದಾದುಂದಿಗೆ ಬಲಿಯಾಗುತ್ತಾರೆ ಎಂಬುದರ ತಲಸ್ಪರ್ಶಿ ವಿಶ್ಲೇಷಣೆ ಇಲ್ಲಿದೆ. ಭೂಮಿಯ ಗೀರುಗಾಯಗಳಿಗೆ ಕಾರಣರಾದವರ ಬಗ್ಗೆ ಕಡುಖಾರದ ಟೀಕೆಗಳೂ ಇಲ್ಲಿವೆ; ನೆಲದ ಗಾಯಗಳಿಗೆ ಮುಲಾಮು ಹಚ್ಚುತ್ತಿರುವ ಜನಸಾಮಾನ್ಯರ ಕುರಿತ ಮೆಚ್ಚುಗೆ ಮಾತುಗಳೂ ಇಲ್ಲಿವೆ.
ಹೋರಾಟಗಾರ್ತಿ, ಸಾಹಿತಿ, ಕವಯಿತ್ರಿ ರೂಪಾ ಹಾಸನ ಅವರು ಇದುವರೆಗೆ 18 ಚಿಂತನಶೀಲ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಸ್ವೀಡನ್ನಿನ ಗ್ರೇಟಾ ಥನ್‌ಬರ್ಗ್ ಪ್ರಸಿದ್ಧಿಗೆ ಬರುವ ಮೊದಲೇ ಇವರು ತಂಡ ಕಟ್ಟಿಕೊಂಡು ಹಾಸನದ ಆಜೂಬಾಜು ಅನೇಕ ಕೆರೆ, ಕಲ್ಯಾಣಿಗಳಲ್ಲಿ ತೀರ್ಥೋದ್ಭವ ಮಾಡಿಸಿದವರು. ಪರಿಸರದ ಪ್ರಶ್ನೆ ಬಂದಾಗ ರೂಪಾ ಹಸಿಮಣ್ಣಿನ ಪದರಕ್ಕೂ ಇಳಿದು ಅಲ್ಲಿಂದ ಮೇಲಕ್ಕೆ, ಗಗನಕ್ಕೇರುತ್ತಾರೆ. ನಿನ್ನೆ ನಾಳೆಗಳ ಪುಟ ತಿರುಗಿಸಿ ಭೂಮಿಯ ಆಗುಹೋಗುಗಳನ್ನು ಅವರು ಪರಿಕಿಸುವಾಗ ಅಕ್ಷರಗಳ ತಂಗಾಳಿ ಬೀಸುತ್ತದೆ. ಪುಟಗಳ ಮಧ್ಯೆ ಇವರೇ ಹೆಣೆದ ಚುಕ್ಕಿಚಿತ್ರಗಳು ಮತ್ತು ನಲ್ಗವನಗಳು ಪ್ರಪಾತದಂಚಿನ ಅಪಾಯಸೂಚಕ ಹೂಗಳಾಗಿ ತೋರುತ್ತವೆ.
– ನಾಗೇಶ ಹೆಗಡೆ